ರಜ್ಜಬ್ 1567 - 1689. ವ್ರಜಭಾಷೆಯ ಸಂತಕವಿ. ಸಂತ ದಾದೂ ದಯಾಲನ ಪ್ರಮುಖ ಶಿಷ್ಯರಲ್ಲೊಬ್ಬ. ಅಕ್ಬರನ ಸಮಕಾಲೀನ. ರಜ್ಜಬ್‍ದಾಸ್, ರಜ್ಜಬ್ ಅಲಿಖಾನ್ ಎಂಬ ಹೊಸ ಹೆಸರೂ ಇವನಿಗಿದೆ. ಈತ ಪಠಾನ್ ವಂಶದಲ್ಲಿ, ಜಯಪುರದ ಬಳಿಯ ಸಾಂಗಾನೇರ್‍ನಲ್ಲಿ ಹುಟ್ಟಿದ. ಈತನ ತಂದೆ ಜಯಪುರ ರಾಜ್ಯದಲ್ಲಿ ಅತ್ಯಂತ ಉನ್ನತ ಹುದ್ದೆಯಲ್ಲಿದ್ದ. ಇವನ ಬಾಲ್ಯಸುಖದಿಂದ ಕಳೆಯಿತು. ಪ್ರಾಪ್ತವಯಸ್ಕನಾದಾಗ ವಿವಾಹ ಏರ್ಪಾಡುಗಳು ನಡೆದುವು. ಮದುವಣಿಗನನ್ನು ಕರೆದುಕೊಂಡು ಮದುವೆಯ ದಿಬ್ಬಣ ಹೊರಟಿತು. ಆದರೆ ಹಾದಿಯಲ್ಲಿ ಅಮೇರ್‍ಗುಡ್ಡದಲ್ಲಿದ್ದ ದಾದೂ ಆಶ್ರಮದ ಭಕ್ತಿಮಯ ವಾತಾವರಣದಿಂದ ಆಕರ್ಷಿತನಾದ ರಜ್ಜಬನು ದಾದೂದಯಾಲನ ಚರಣಗಳಲ್ಲಿ ತಲೆಯಿಟ್ಟು ಆರ್ಶೀವದಿಸುವಂತೆ ಕೋರಿದ. ಗೃಹಸ್ಥಾಶ್ರಮವನ್ನು ಸ್ವೀಕರಿಸುವಂತೆ ದಾದೂ ಹೇಳಿದರೂ ಅದನ್ನು ಕೇಳದೆ ಹರಿಭಕ್ತಿಯನ್ನು ಸ್ವೀಕರಿಸಿದ.  ದಾದೂವಿನಿಂದ ದೀಕ್ಷೆ ಪಡೆದು ದಾದೂ ಆಶ್ರಮದಲ್ಲೇ ಇದ್ದುಕೊಂಡು ಸಾಧು ಸಂತರ ಸೇವೆಯಲ್ಲಿ ನಿರತನಾದ.
ದಾದೂ ಪಂಥದ ಸಂತರಲ್ಲಿ ರಜ್ಜಬನಿಗೆ ವಿಶಿಷ್ಟ ಸ್ಥಾನವುಂಟು. ಈತ ದಾದೂ ವಿಚಾರಗಳನ್ನು ವ್ಯಾಪಕವಾಗಿ ಪ್ರಚಾರ ಮಾಡಿದ. ನಿರ್ಗುಣ ಸಂತರ ರೀತಿಯಲ್ಲಿ e್ಞÁನವೊಂದನ್ನೇ ಸ್ವೀಕರಿಸಿದೆ e್ಞÁನ ಮತ್ತು ಭಕ್ತಿಯ ಸಮನ್ವಯವನ್ನು ಬ್ರಹ್ಮಾನುಭೂತಿಗೆ ಪ್ರಶಸ್ತಮಾರ್ಗವೆಂದೂ ಈತ ಭಾವಿಸಿದ. ಗುರುವಿನಿಂದ ಆತ್ಮ e್ಞÁನ ಮತ್ತು ಸಚ್ಚಿದಾನಂದ ಪರಮಾತ್ಮನ ರಹಸ್ಯಾನುಭೂತಿಯನ್ನು ಪಡೆದುಕೊಂಡು ರಜ್ಜಬನ ದೃಷ್ಟಿಯಲ್ಲಿ ಗುರು ಪರಮಾತ್ಮ ಸ್ವರೂಪಿ. ಗುರು ಮತ್ತು ಗೋವಿಂದರಲ್ಲಿ ಯಾವುದೇ ಭೇದವಿಲ್ಲ. ಈತನ ಗುರುಭಕ್ತಿ ಎಷ್ಟು ತೀವ್ರವಾಗಿತ್ತೆಂದರೆ ತನ್ನ ಗುರುವಿನ ನಿಧನದ ಅನಂತರ ಬೇರೆ ಯಾರನ್ನೂ ನೋಡುವುದಿಲ್ಲವೆಂದು ಕಣ್ಣಿಗೆ ಪಟ್ಟಿಕಟ್ಟಿಕೊಂಡನಂತೆ. ದಾದೂ ಸಮಾಧಿಸ್ಥನಾದ ಅನಂತರ ಈತ ಸಾಂಗಾನೇರ್‍ಗೆ ಬಂದು ನೆಲೆಸಿದ. ಅಲ್ಲೇ ಸಮಾಧಿಹೊಂದಿದ.
ರಜ್ಜಬ್ ಅನೇಕ ಭಕ್ತಿಗೀತೆಗಳನ್ನು ರಚಿಸಿದ್ದಾನೆ. ಸುಮಾರು 10013 ಗೀತೆ `ರಜ್ಜಬ ಬಾನೀ` ಎಂಬ ಸಂಕಲನದಲ್ಲಿ ಸಂಕಲಿತಗೊಂಡಿವೆ. ದಾದೂವಿನ ದಟ್ಟ ಪ್ರಭಾವಕ್ಕೆ ಒಳಗಾಗಿರುವ ಇವನ ಗೀತೆಗಳು ಓರ್ವ ಭಕ್ತನ ಅಂತಃಕರಣದಿಂದ ಪುಟಿದುಬಂದಿರುವ ಭಾವಲಹರಿಗಳಾಗಿ ಮನಸೆಳೆಯುತ್ತವೆ.

	ರಜ್ಜಬ್‍ನ ಶಿಷ್ಯರಲ್ಲಿ ಗೋವಿಂದದಾಸ್ ಹಾಗೂ ಷೆಮಮ್‍ದಾಸ್ ಪ್ರಮುಖರು.  ರಜ್ಜಬನ ಅನುಯಾಯಿಗಳು `ರಜ್ಜಬ್ ಪಂಥಿ` ಗಳೆಂದು ಪ್ರಸಿದ್ಧರಾಗಿದ್ದಾರೆ. ಗುರು ದಾದೂದಯಾಲನ ಬರೆಹಗಳನ್ನು ಈತ ಅಂಗವಧೂ ಎಂಬ ಹೆಸರಿನಲ್ಲಿ ಸಂಪಾದಿಸಿಕೊಟ್ಟಿದ್ದಾನೆ. ತನ್ನ ಹಾಗೂ ಇನ್ನಿತರ ಪ್ರಸಿದ್ಧ ನಿರ್ಗುಣ ಸಂತರ ಕೃತಿಗಳನ್ನು `ಸಬ್ಬಂಗೀ` ಎಂಬ ಹೆಸರಿನಲ್ಲಿ ಸಂಪಾದಿಸಿದ್ದಾನೆ. ದಾದೂವಿನ ಪ್ರೇಮಸಂಬಂಧ ಗೀತೆಗಳಲ್ಲಿ ಸದಾನಂದ ಸಂಪೋಷಿತವಾದ ರಸಮಯ ಭಕ್ತಿಭಾವ ಕಂಡುಬರುತ್ತದೆ.           
  (ಟಿ.ಎಚ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ